ಕೃತಕ ಹಲ್ಲುಗಳು   
  
ಬಿದ್ದುಹೋದ ಅಥವಾ ಕಿತ್ತು ತೆಗೆದ ಹಲ್ಲುಗಳ ಬದಲಾಗಿ ಬಾಯಿಗೆ ಅಳವಡಿಸಿದ ಹಲ್ಲುಗಳು. ಈ ತರಹೆಯ ಕೃತಕ ಹಲ್ಲುಗಳನ್ನು ಕಟ್ಟಿಸಿಕೊಳ್ಳುವುದು ಬಹುಪುರಾತನ ಕಾಲದಿಂದಲೂ ಬಂದ ಪದ್ಧತಿ. ಆದರೆ ಆಗ ಕೃತಕ ಹಲ್ಲುಗಳನ್ನು ಮರದಿಂದ ತಯಾರಿಸಿ ಅಥವಾ ಪ್ರಾಣಿಗಳ ಹಲ್ಲುಗಳನ್ನು ಅಳವಡಿಸಿ ಕಟ್ಟಿಸಿಕೊಳ್ಳುತ್ತಿದ್ದರು. ಪಿಂಗಾಣಿಯಿಂದ ಕೃತಕ ಹಲ್ಲುಗಳ ನಿರ್ಮಾಣ ಪ್ರಾರಂಭವಾದದ್ದು ಹದಿನೆಂಟನೆಯ ಶತಮಾನದಲ್ಲಿ. ಹತ್ತೊಂಬತ್ತನೆಯ ಶತಮಾನದಲ್ಲಿ ಪ್ಯಾರಿಸ್ಸಿನಲ್ಲಿ ವೃತ್ತಿ ನಡೆಸುತ್ತಿದ್ದ ದಂತವೈದ್ಯನೊಬ್ಬ ಪಿಂಗಾಣಿಯಿಂದ ರಚಿಸಿದ ಬಿಡಿ ಹಲ್ಲುಗಳನ್ನು ಚಿನ್ನ ಅಥವಾ ಬೆಳ್ಳಿಯಲ್ಲಿ ಎರಕಿಸಿ ಮೇಲ್ಭಾಗಕ್ಕೊಂದು ಕೆಳಭಾಗಕ್ಕೊಂದು ಕೃತಕ ದಂತಪಂಕ್ತಿಯನ್ನು ಮಾಡಿ ಬಹಳ ಐಶ್ವರ್ಯವಂತರ ದಂತವಿಹೀನ ಬಾಯಿಗಳಿಗೆ ಪೋಣಿಸುತ್ತಿದ್ದ. ಕ್ರಮೇಣ ಅಮೆರಿಕ ಸಂಯುಕ್ತಸಂಸ್ಥಾನದಲ್ಲೂ ಪಿಂಗಾಣಿಯಿಂದ ಬಹು ಸ್ವಾಭಾವಿಕವಾಗಿ ಕಾಣುವಂತೆ ಅವರವರ ಬಣ್ಣ, ವಯಸ್ಸು, ಮುಖದ ಆಕಾರವೇ ಮೊದಲಾದವಕ್ಕೆ ಅನುಗುಣವಾಗಿ ಕೃತಕ ಹಲ್ಲಿನ ಪಂಕ್ತಿ ನಿರ್ಮಾಣವನ್ನು ಪ್ರಾರಂಭಿಸಿದರು. ಸ್ವಿಟ್ಸರ್ಲೆಂಡಿನ ದಂತವೈದ್ಯನೊಬ್ಬ ಆಕಾರ ಸಾಮ್ಯದಲ್ಲಿ ಮಾತ್ರವಲ್ಲ ಅಗಿಯಲು ಸಹ ನೆರವಾಗುವಂಥ ಹಲ್ಲುಗಳನ್ನು ನಿರ್ಮಿಸಿದ. ಇದರಿಂದ ಬಹಳ ಜನರಿಗೆ ಪ್ರಯೋಜನವಾಯಿತು. ಬಾಯಿಯಲ್ಲಿ ಕೆಲವು ಹಲ್ಲುಗಳು ಹೋಗಿದ್ದರೂ ಸ್ವಾಭಾವಿಕ ಹಲ್ಲುಗಳಿಗೆ ಸೇರಿಸಿದಂತೆ ಸೇತುವೆಯ ಮಾದರಿ ಕೃತಕ ಹಲ್ಲುಗಳನ್ನು ಮಾಡಿಸುವ ಪದ್ಧತಿಯೂ ಪ್ರಾರಂಭವಾಯಿತು. ಇದಕ್ಕೆ ಹಲ್ಲಿನ ಸೇತುವೆಯೆಂದು ಹೆಸರು. ಪಿಂಗಾಣಿಯ ಹಲ್ಲುಗಳಿಗೆ ಸ್ವಾಭಾವಿಕ ಹಲ್ಲುಗಳ ಬಣ್ಣವನ್ನು ಕೊಡಲು ಬೇರೆ ಬೇರೆ ಲೋಹಗಳ ಮಿಶ್ರಣಗಳನ್ನು ಉಪಯೋಗಿಸುತ್ತಾರೆ. ಹಲ್ಲನ್ನು ಜೋಡಿಸಲು ಬುಡದ ಭಾಗಕ್ಕೆ ಮೊದಲು ಲೋಹಗಳನ್ನು (ಚಿನ್ನ, ಬೆಳ್ಳಿ) ಬಳಸುತ್ತಿದ್ದರು. ಆಮೇಲೆ ರಬ್ಬರ್ ಬಳಕೆಗೆ ಬಂತು. ಈಚೀಚೆಗೆ ಅಂದರೆ 1930ರಿಂದೀಚೆಗೆ ಕೃತಕ ದಂತಗಳಿಗೂ ಬುಡದ ಭಾಗಕ್ಕೂ ಅನುಗುಣವಾದ ಬಣ್ಣವುಳ್ಳ ಪ್ಲಾಸ್ಟಿಕನ್ನು ಉಪಯೋಗಿಸುತ್ತಿದ್ದಾರೆ. ಈಚೆಗೆ ನಿರ್ಮಿಸಿರುವ ಕೃತಕ ಹಲ್ಲುಗಳನ್ನು ಯಾರೂ ಕೃತಕವೆಂದು ಹೇಳಲಾಗುವುದಿಲ್ಲ. ಅವು ಅಷ್ಟು ಸ್ವಾಭಾವಿಕವಾಗಿ ಕಾಣುತ್ತವೆ. ದಂತಶಾಸ್ತ್ರ ಬಹಳ ಮುಂದುವರಿಯುತ್ತಿದೆ. ಇದುವರೆಗೆ ನಿರ್ಮಿಸುತ್ತಿದ್ದ ಕೃತಕ ಹಲ್ಲುಗಳನ್ನು ರಾತ್ರಿಯ ವೇಳೆ ತೆಗೆದಿಡಬೇಕಾಗುತ್ತಿತ್ತು. ಈಗೀಗ ದವಡೆಯ ಮೂಳೆಗೆ ಸೇರಿಸುವಂತೆ ಕೃತಕದಂತಪಂಕ್ತಿಯನ್ನು ನಿರ್ಮಿಸಲಾಗುತ್ತಿದೆ. ಇದರಿಂದ ರಾತ್ರಿಯ ವೇಳೆಯೂ ಆ ಪಂಕ್ತಿಯನ್ನು ಕಳಚಿ ಇಡಬೇಕಾಗಿಲ್ಲ.

	ಕೃತಕ ಹಲ್ಲುಗಳ ತಯಾರಿಕೆ : ಕಾರ್ಖಾನೆಗಳಲ್ಲಿ ಫೆಲ್ಡ್‍ಸ್ಪಾರ್, ಸಿಲಿಕ, ಬಿಳಿ ಜೇಡಿಗಳನ್ನು (ಕಯೊಲಿನ್) ಕಲಿಸಿಟ್ಟು ಸುಮಾರು 13150 ಸೆಂ. ಉಷ್ಣತೆಗೆ ಏರಿಸಿದರೆ ಪಿಂಗಾಣಿ ಹಲ್ಲುಗಳು ತಯಾರಾಗುವುವು. ಪಾಲಿಮೆತಿಲ್ ಮೆತಕ್ರಿಲೇಟಿಗೆ ಟೈಟಾನಿಯಂ, ಕ್ರೋಮಿಯಂ, ನಿಕ್ಕಲ್, ಕೋಬಾಲ್ಟ್, ಕಬ್ಬಿಣ ಲೋಹಗಳ ಆಕ್ಸೈಡುಗಳಿಂದ ಬೇಕಾದ ಬಣ್ಣ ಕೊಟ್ಟರೆ ಪ್ಲಾಸ್ಟಿಕ್ ಹಲ್ಲುಗಳು ಚೆನ್ನಾಗಿರುತ್ತವೆ. ಪಿಂಗಾಣಿ ಹಲ್ಲುಗಳನ್ನು ತಯಾರಿಸುವ ಮೊದಲು ಪ್ಲಾಸ್ಟರ್ ಆಫ್ ಪ್ಯಾರಿಸಿನಿಂದಲೋ ಮತ್ತಿತರ ತಕ್ಕನಾದ ವಸ್ತುವಿನಿಂದಲೋ ಬೇಕಾದ ಹಲ್ಲುಗಳ ಆಕಾರ, ಗಾತ್ರಗಳನ್ನು ರೂಪಿಸಿಕೊಳ್ಳಬೇಕು. ಇದರಿಂದ ಲೋಹದ ಅಚ್ಚುಗಳನ್ನು ಮಾಡಿಕೊಂಡು ಅವುಗಳಲ್ಲಿ ಪಿಷ್ಟ (ಸ್ಟಾರ್ಚ್), ಪಿಂಗಾಣಿಪುಡಿ, ಹಲ್ಲುಗಳಿಗೆ ಬೇಕಾದ ಬಣ್ಣಕೊಡಲು ಲೋಹದ ಆಕ್ಸೈಡುಗಳನ್ನು ನೀರಿನಲ್ಲಿ ಬೆರೆಸಿ ಗಟ್ಟಿಯಾಗಿ ಕಣಿಕದಂತೆ ನಾದಿಕೊಂಡು, ಪದರ ಪದರವಾಗಿ ಹಾಕುತ್ತ, ಸಹಜ ಹಲ್ಲುಗಳ ಮೇಲಿನ ವಜ್ರಗಾರೆಯಂತೆ ಹೊಳೆವ ಹಾಗೆ ಮಾಡಬೇಕು. ದಂತ್ಯದ (ಡೆಂಟಿನ್) ಹಾಗೆ ಗಟ್ಟಿಯಾಗಿ ಕಾಣಬೇಕಾದ ಒಳಭಾಗಕ್ಕೆ ಬೇರೆ ಪಿಂಗಾಣಿ ಕಣಿಕದ ಪುಡಿ ತುಂಬಬೇಕು. ಆಮೇಲೆ ಲೋಹದ ಅಚ್ಚುಗಳನ್ನು ಮುಚ್ಚಿ ಉರಿಯೊಲೆಯಲ್ಲಿ ಸುಟ್ಟಾಗ ಹಲ್ಲುಗಳು ಗಟ್ಟಿ ಬೀಳುತ್ತವೆ. ಈ ರೀತಿ ಅಚ್ಚುಗಳಲ್ಲಿ ಎರಕ ಹೊಯ್ದು ಹಲ್ಲುಗಳನ್ನು ಹೊರತೆಗೆದು ಕೊನೆಗೆ ಮತ್ತೆ ಹೊಳಪಿಡುವಂತೆ ಏರಿದ ಕಾವಿನಲ್ಲಿ ಸುಡಬೇಕು. ಮೋನೊಮೆತಿಲ್ ಮೆತಕ್ರಿಲೇಟ್ ದ್ರವವನ್ನೂ ಪಾಲಿಮೆತಿಲ್ ಮೆತಕ್ರಿಲೇಟ್ ಪುಡಿಯನ್ನೂ ಕಣಿಕದಂತೆ ಹದವಾಗಿ ಕಲಸಿ ನಾದಿಕೊಂಡು ಅಚ್ಚುಗಳಲ್ಲಿ ತುಂಬಿಸಿ, ಒತ್ತಡದಲ್ಲಿರಿಸಿ, ನೀರಿನ ಪಾತ್ರೆಯಲ್ಲಿಟ್ಟು ನಿಧಾನವಾಗಿ 1000 ಸೆಂ. ಮಟ್ಟದ ತನಕ ಕಾಯಿಸಿದರೆ ಪ್ಲಾಸ್ಟಿಕ್ಕಿನ ಕೃತಕ ಹಲ್ಲುಗಳು ತಯಾರಾಗುತ್ತವೆ. ಆಮೇಲೆ ಇವಕ್ಕೆ ಗಾಜು ಗಿಲಾವು ಮಾಡಬೇಕು. ಕಾರ್ಖಾನೆಯಲ್ಲಿ ತಯಾರಾದ ಕೃತಕ ಹಲ್ಲುಗಳು ಸಾಮಾನ್ಯವಾಗಿ ಮೇಣ, ಪ್ಲಾಸ್ಟಿಕ್ ಹಾಳೆಗಳು ಇಲ್ಲವೇ ದಿಂಡುಗಳಲ್ಲಿ ಹುದುಗಿಸಿ ಮಾರಾಟಕ್ಕೆ ಬರುತ್ತವೆ. ಈ ಕೃತಕ ಹಲ್ಲು ಸಾಲುಗಳಲ್ಲಿ ಮುಂದಿನ ಆರು ಹಲ್ಲುಗಳೂ (4 ಮುಂದವಡೆ ಹಲ್ಲುಗಳು. 4 ಅರೆವಲ್ಲುಗಳು) ಒಂದೊಂದು ದವಡೆಯಲ್ಲೂ ಇರುತ್ತವೆ. ಕೃತಕ ದಂತ ಪಂಕ್ತಿಯಲ್ಲಿ ಒಟ್ಟು 28 ಹಲ್ಲುಗಳು ಮಾತ್ರ ಇರುತ್ತವೆ. ಇದರಲ್ಲಿ ಹಿಂದುಗಡೆ ಜಾಗ ಸಾಲದ್ದರಿಂದ ತೀರ ಹಿಂದಣ ದವಡೆ ಹಲ್ಲುಗಳು ಇರುವುದಿಲ್ಲ.

	ಕೃತಕ ಹಲ್ಲು ಕಟ್ಟುವಿಕೆ : ಹಲ್ಲು ಕಟ್ಟಿಸಿಕೊಳ್ಳುವವನಿಗೆ ಬೇಕಿರುವ ತೋರಿಕೆ, ಆಕಾರ, ಗಾತ್ರ, ನಿಜಗೆಲಸಗಳಿಗೆ ತಕ್ಕಂತೆ ಹಲ್ಲುಗಳನ್ನು ಹಲ್ಲು ವೈದ್ಯರು ಆಯ್ದುಕೊಳ್ಳುವರು. ಇದನ್ನು ಬಳಸುವವರ ಬಾಯಿಯ ವಸಡುಗಳ ದವಡೆ ಏಣುಗಳ ಅಳತೆ, ಮುದ್ರೆಗಳನ್ನು ಎತ್ತಿಕೊಂಡು ಮಾಡಿದ ಅಡಿಗಟ್ಟಿಗೆ ಆರಿಸಿಕೊಂಡ ಕೃತಕ ಹಲ್ಲುಗಳನ್ನು ಭದ್ರವಾಗಿ ಸಿಕ್ಕಿಸಿ ಹಲ್ಲು ಸಾಲುಕಟ್ಟುವರು. ಆಗ ಇದು ಬಚ್ಚಬಾಯಿಯ ವಸಡುಗಳ ದವಡೆಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಮೇಲೆ ಆರು ಕೆಳಗೆ ಆರು ಇರುವ ಮುಂದಣ ಹಲ್ಲುಗಳಿಂದಲೇ ಮುಖಕ್ಕೆ ಅಂದ ಬರುವುದು. ಕೋರೆ ಹಲ್ಲುಗಳು ಆಹಾರವನ್ನು ಸಿಗಿದು ಸೀಳುತ್ತವೆ. ಬಾಚಿಹಲ್ಲುಗಳು ಹರಿದು ಕೆತ್ತುತ್ತವೆ.  ಮಾತಿನ ಉಚ್ಚಾರಣೆ ಮತ್ತು ಹಾಡುಗಾರಿಕೆಗಳ ಧ್ವನಿ ರೂಪಿಸುವುದರಲ್ಲೂ ಹಲ್ಲುಗಳು ನೆರವಾಗುತ್ತವೆ. ದವಡೆ ಹಲ್ಲುಗಳು ಆಹಾರವನ್ನು ಚೆನ್ನಾಗಿ ಅರೆದು ಸುಲಭವಾಗಿ ಅರಗುವ ಹಾಗೆ ಮಾಡುವುವು. ಸಹಜ ಹಲ್ಲುಗಳ 1/10 ರಿಂದ 1/3 ರಷ್ಟು ಸಿಗಿವ, ಅಗಿಯುವ ಬಲವನ್ನು ಕೃತಕ ಹಲ್ಲುಗಳು ತಡೆಯಬಲ್ಲವು. ಹಲ್ಲುಗಳಿಲ್ಲದವರು ಎಂದಿನ ಆರೋಗ್ಯವನ್ನು ಕಾಪಾಡಿಕೊಳ್ಳಲೂ ಮುಖದ ಅಂದ ಉಳಿಸಿಕೊಳ್ಳಲೂ ಕೃತಕ ಹಲ್ಲುಗಳನ್ನು ಕಟ್ಟಿಸಿಕೊಳ್ಳಬೇಕು.  (ಎಸ್.ಆರ್.ಸಿ. : ಬಿ.ಕೆ.ವಿ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ